ಪೆಟ್ರೋಲ್‌ನಲ್ಲಿ ಶೇ.20 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ನಿಗದಿಗೂ ಮೊದಲೇ 2025 ಕ್ಕೆ ಸಾಧಿಸಲಾಗುವುದು : ಪ್ರಧಾನಿ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಪುಣೆಯ ರೈತನೊಂದಿಗೆ ಸಂವಾದ ನಡೆಸಿದರು, ಆ ರೈತ ಸಾವಯವ ಕೃಷಿ ಮತ್ತು ಕೃಷಿಯಲ್ಲಿ ಜೈವಿಕ ಇಂಧನ ಬಳಕೆಯ ಅನುಭವವನ್ನು ಪ್ರಧಾನಿವರೊಂದಿಗೆ ಹಂಚಿಕೊಂಡರು. "ಭಾರತದಲ್ಲಿ 2020-2025ರಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ಮಾರ್ಗಸೂಚಿ ಕುರಿತ ತಜ್ಞರ ಸಮಿತಿಯ ವರದಿ" ಯನ್ನು ಪ್ರಧಾನಿ ಬಿಡುಗಡೆ ಮಾಡಿದರು. ದೇಶಾದ್ಯಂತ ಎಥೆನಾಲ್ ಉತ್ಪಾದನೆ ಮತ್ತು ವಿತರಣೆಗಾಗಿ ಅವರು ಪುಣೆಯಲ್ಲಿ ಮಹತ್ವಾಕಾಂಕ್ಷೆಯ ಇ -100 ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದರು. ಈ ವರ್ಷದ ಕಾರ್ಯಕ್ರಮದ ಧ್ಯೇಯ ‘ಉತ್ತಮ ಪರಿಸರಕ್ಕಾಗಿ ಜೈವಿಕ ಇಂಧನಗಳ ಉತ್ತೇಜನ. ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಪ್ರಕಾಶ್ ಜಾವಡೇಕರ್, ಶ್ರೀ ಪಿಯೂಷ್ ಗೋಯಲ್ ಮತ್ತು ಶ್ರೀ ಧರ್ಮೇಂದ್ರ ಪ್ರಧಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.